ತಿರುಚ್ಚೆಂದೂರ್
ಪುಣ್ಯಕ್ಷೇತ್ರ.  ತಮಿಳುನಾಡಿನ ತಿರುನೆಲ್‍ವೇಲಿ ಜಿಲ್ಲೆಗೆ ಸೇರಿದ ಈ ಸ್ಥಳ ಮನ್ನಾರ್ ಜಲಸಂಧಿಯ ಬಳಿ.  ಸಮುದ್ರದ ದಂಡೆಯ ಮೇಲಿದೆ. ಈ ಸ್ಥಳವನ್ನು ತಿರುಚ್ಚಿವಾಲೈವಾಯ್ ಮತ್ತು ಜಯಂತಿಪುರಮ್ ಎಂದೂ ಕರೆಯುತ್ತಾರೆ. ದಕ್ಷಿಣ ಭಾರತದಲ್ಲಿರುವ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಇದಕ್ಕೊಂದು ವಿಶೇಷ ಸ್ಥಾನವಿದೆ.  ಸಂಪ್ರದಾಯದ ಪ್ರಕಾರ ಸುಬ್ರಹ್ಮಣ್ಯ ಸ್ವಾಮಿ ಶೂರಪದ್ಮ ರಾಕ್ಷಸನನ್ನು ಸೋಲಿಸಿದ ಕೂಡಲೇ ತಂಗಿದ್ದ ಮೊದಲ ಸ್ಥಳವೇ ಇದು ಎನ್ನಲಾಗಿದೆ.  ತಿರುಮುರುಗ¾ùಪ್ಪಾಡೈ ಎಂಬ ತಮಿಳು ಸಂಘ ಕೃತಿಯಲ್ಲಿ ಇದನ್ನು ಸುಬ್ರಹ್ಮಣ್ಯ ತಂಗಿದ ಆರು ಇರ್ಕೆವೀಡುಗಳಲ್ಲೊಂದು ಎಂದು ವರ್ಣಿಸಲಾಗಿದೆ.  ಇದರ ಐತಿಹ್ಯ 2ನೆಯ ಶತಮಾನಕ್ಕೂ ಹಿಂದಿನದೆಂದು ಹೇಳಲಾಗುತ್ತದೆ.  ತರುವಾಯದ ಕಾಲದಲ್ಲಿ ಶಿವಾಲಯಗಳನ್ನು ಇಲ್ಲಿ ಕಟ್ಟಲಾಗಿದೆ.  9 ನೆಯ ಶತಮಾನದಲ್ಲಿದ್ದ ಪಾಂಡ್ಯರಾಜನಾದ ವರಗುಣ ಮಹಾರಾಜನ ಶಾಸನಗಳು ಇಲ್ಲಿವೆ.  ಆಮೇಲೆ ತಿರುವಾಂಕೂರ ರಾಜ್ಯದಲ್ಲಿ ಇದು ಸೇರ್ಪಡೆಯಾದಾಗ ಅದರ ರಾಜನೊಬ್ಬ ದೇವರ ಪೂಜಾರ್ಥವಾಗಿ ತುಳುನಾಡಿನಲ್ಲಿ `ಪೋತ್ತಿಯ ಏರ್ಪಾಡು ಮಾಡಿದುದಾಗಿ ತಿಳಿದುಬರುತ್ತದೆ.  ಈ ದೇವಾಲಯ ಮೂರು ಪ್ರಾಕಾರಗಳನ್ನು ಹೊಂದಿದೆ.  ಗರ್ಭಗೃಹದೊಳಗಡೆ ಶಿಲಾಪ್ರತಿಮೆ ನಿಂತಿದೆ.  ಪೂರ್ವ ಪಶ್ಚಿಮಗಳಲ್ಲಿ ಎರಡು ಗೋಪುರಗಳಿವೆ.  ಪ್ರಾಕಾರದಲ್ಲಿ ಅಲ್ಲಲ್ಲಿ ಶಿಲಾಮಂಟಪಗಳಿದ್ದು ಅಲ್ಲಿ ಶಿವ ಮೊದಲ್ಲಾದ ದೇವತೆಗಳಿವೆ.  ಪ್ರಾಕಾರಗಳಲ್ಲಿ ವಿಷ್ಣುವಿನ ಒಂದು ಗುಹಾ ದೇವಾಲಯವಿದೆ.  ಇಲ್ಲಿ ಗಜಲಕ್ಷ್ಮಿ, ಶೇಷಶಾಯಿ ಮುಂತಾದ ದೇವತೆಗಳ ಶಿಲ್ಪಗಳಿವೆ.  ಈ ವಿಷ್ಣುಗೃಹದ ಶೈಲಿ ಪ್ರಾಚೀನ ಪಾಂಡ್ಯರ ಕಾಲಕ್ಕೆ (ಸು. 7-8ನೆಯ ಶತಮಾನ) ಅನುಗುಣವಾಗಿದೆ.  ಈ ಗುಹಾದೇವಾಲಯವಲ್ಲದೆ ಮುಖ್ಯ ದೇವಾಯಲದ ಉತ್ತರದಲ್ಲಿ ಇನ್ನೊಂದು ಗುಹಾದೇವಾಲಯವಿದೆ.  ಅದು ಸುಬ್ರಹ್ಮಣ್ಯಸ್ವಾಮಿಯ ದೇವಿಯಾದ ವಲ್ಲಿಯದೆಂದು ಹೇಳಲಾಗುತ್ತದೆ.  ಇವುಗಳಲ್ಲದೆ ಗ್ರಾಮದೊಳಗಡೆ ಈಶ್ವರ ಹಾಗೂ ಗ್ರಾಮದೇವತೆಗಳ ದೇವಸ್ಥಾನಗಳೂ ಇವೆ.  ಶಿವಾಲಯದಲ್ಲಿ ಶಿಲಾಮಂಟಪಗಳಿವೆ.  ಇವನ್ನು ಉತ್ಸವ ಹಾಗೂ ವಿಶೇಷ ಪೂಜಾ ಸಂದರ್ಭಗಳಿಗಾಗಿ ಕಟ್ಟಿರುವಂತೆ ಕಾಣುತ್ತದೆ.  ಸುಬ್ರಹ್ಮಣ್ಯ ದೇವಾಲಯದಲ್ಲೂ ವರ್ಷದಲ್ಲಿ ಅನೇಕ ಉತ್ಸವಗಳು ನಡೆಯುತ್ತವೆ.  ಅವುಗಳಲ್ಲಿ ಸ್ಕಂದಷಷ್ಟಿ, ಮಾಶಿಮಾಘಮ್, ವೈಕಾಶಿವಿಶಾಖ ಹಾಗೂ ಅಡಿಕೃತ್ತಿಗೈ ಇವು ಪ್ರಸಿದ್ಧವಾದವು.  ಇಲ್ಲಿಯ ಸ್ಥಳ ಮತ್ತು ದೇವರ ಮಹಾತ್ಮೆಯನ್ನು ಕುರಿತು ಅನೇಕ ಕವಿಗಳು ಕೃತಿರಚನೆಗೆ ಮಾಡಿದ್ದಾರೆ.				(ಪಿ.ಆರ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ